Tuesday, December 28, 2010

ಗುರಿ - ಶ್ರಮ - ಶ್ರದ್ಧೆ - ಸಹನೆ - ನಂಬಿಕೆ

ಸಾಧನೆಯ ಹಾದಿಯಲ್ಲಿ ನಿಮಗೆ ಅತೀ ಅಗತ್ಯವಾಗಿದ್ದ ಆರು ಗೆಳೆಯರಲ್ಲಿ ಗುರಿ - ಶ್ರಮ - ಶ್ರದ್ಧೆ - ಸಹನೆ - ನಂಬಿಕೆಯೆಂಬ ಐದು ಗೆಳೆಯರನ್ನು ಪರಿಚಯಿಸಿಕೊಂಡಿರಲ್ಲವೆ? ಇನ್ನು ಕೊನೆಯ ಗೆಳೆಯ ಒಬ್ಬನಿದ್ದಾನೆ. ಅವನ ಹೆಸರು ಪ್ರಾಮಾಣಿಕತೆ!...
ಆ ಹೆಸರು ಕೇಳುತ್ತಿದ್ದಂತೆಯೇ ಗಹಗಹಿಸಿ ನಗಬೇಕೆನಿಸುತ್ತದೆಯಾ?... ನಿಜ. ಇಂದಿನ ಈ ಜಗತ್ತಿನಲ್ಲಿ ಬಹಳಷ್ಟು ಜನರಿಗೆ ಅಂಥಹಾ ಗೆಳೆಯ ಬೇಡವೇ ಬೇಡ. ಅವನು ಕೈ ಹಿಡಿದು ನಡೆಸುವುದಿಲ್ಲ, ಕೈಕೊಟ್ಟು ಮಣ್ಣು ತಿನ್ನಿಸುತ್ತಾನೆ. ಆತನನ್ನು ನಂಬಿಕೊಂಡರೆ ಚಿಪ್ಪೇ ಗತಿ: ಇದು ಶೇ.೯೦ ರಷ್ಟು ಜನರ ಪ್ರಾಮಾಣಿಕ ಅಭಿಪ್ರಾಯ. ಡೂ ಇಟ್ ಬೈ ಹುಕ್ ಆರ್ ಕ್ರೂಕ್ ಎಂಬುದು ಎಲ್ಲರ ಮನೋಮಂತ್ರ. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸರಿ ಎಂಬುದೊಂದು ಲೋಕೋಕ್ತಿ. ಬದುಕನ್ನೇ ಯುದ್ಧ ಎಂದುಕೊಂಡರೆ ಆಗ ಏನೇ ಮಾಡಿದರೂ ಸರಿಯೇ ಸರಿ ಎಂದು ಕೆಲವರು ಆ ಮಾತನ್ನು ಸರಿಪಡಿಸಿಕೊಳ್ಳುತ್ತಾರೆ. ಅಲ್ಲಿ ಬದುಕೇ ಮುಖ್ಯವಾದ್ದರಿಂದ ನ್ಯಾಯ-ಅನ್ಯಾಯ, ನೀತಿ-ಅನೀತಿ, ಧರ್ಮ-ಅಧರ್ಮಗಳ ವ್ಯತ್ಯಾಸವೇ ಇರುವುದಿಲ್ಲ. ನಯವಂಚಕತೆ, ನಾಟಕೀಯತೆ, ಮೋಸ, ವಂಚನೆ, ಕುಟಿಲತೆ... ಹೀಗೆ ನಾನಾ ನಮೂನೆಯ ವಿಚಿತ್ರ ಗೆಳೆಯರು ಬಂದು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ಇವರೇ ಬದುಕಿನ ಗುರಿಯನ್ನು ನಿರ್ದೇಶಿಸತೊಡಗುತ್ತಾರೆ. ಈ ನೂರು ಕೌರವರ ನಡುವೆ ನಿಮ್ಮ ಪಂಚ-ಪಾಂಡವ ಗೆಳೆಯರು ಏಗಲಾಗದೆ ಸಾಗಲಾಗದೆ ಆಗಾಗ ವನವಾಸ ಅಜ್ಞಾತವಾಸಕ್ಕೆ ಹೊರಡುತ್ತಾರೆ.
ಪ್ರಾಮಾಣಿಕತೆಯೆಂಬ ಕೃಷ್ಣನೊಬ್ಬ ಮಾತ್ರ ಈ ಕುರುಕ್ಷೇತ್ರದಲ್ಲಿ ಪಾಂಡವರಿಗೆ ಜಯ ತಂದುಕೊಡಬಲ್ಲ. ನಿಮಗೆ ಯಾರು ಬೇಕು ಹೇಳಿ!...
ಒಂದು ಕ್ಷಣ ನಿಮ್ಮ ಮನಸ್ಸು ಹೀಗೆ ಗಂಭೀರವಾಗಿ ಯೋಚಿಸುವುದಾದರೆ... ನಿಮ್ಮದೇ ಒಂದು ಅತಿ ಮುಖ್ಯ ಪ್ರಶ್ನೆಗೆ ಬರೋಣ. ಪ್ರಾಮಾಣಿಕತೆ ಯಾಕೆ ಬೇಕು?... ನಿಜವಾಗಿಯೂ ಅದರಿಂದ ಗೆಲ್ಲುತ್ತೇವಾ?... ಅಕಸ್ಮಾತ್ ಗೆಲ್ಲದಿದ್ದರೆ?...
ಗೆಳೆಯರೆ, ಪ್ರಾಮಾಣಿಕತೆ ಏಕೆ ಬೇಕೆಂದರೆ ಅದು ಆತ್ಮತೃಪ್ತಿಗೆ!... ಹೌದು... ಕೇವಲ ಆತ್ಮತೃಪ್ತಿಗೆ!... ನಾವು ನಡೆದುಬಂದ ಹೆಜ್ಜೆಗಳ ಕಡೆಗೊಮ್ಮೆ ಹಿಂತಿರುಗಿ ನೋಡಿದಾಗ... ನಮ್ಮ ಬಗ್ಗೆ ನಮಗೇ ನಾಚಿಕೆಯೆನಿಸುವುದಾದರೆ, ಛಿ!... ಥೂ!... ಅನ್ನಿಸುವುದಾದರೆ, ಅಥವಾ ಆ ಹೆಜ್ಜೆಗಳ ಅನುಭವವನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳಲು ಮುಜುಗರವಾಗುವುದಾದರೆ... ಆ ಬದುಕು ಯಾಕಾದರೂ ಬೇಕು ಹೇಳಿ. ಸರಿ. ಪ್ರಾಮಾಣಿಕವಾಗಿ ಬದುಕಿದರೆ ಗೆಲ್ಲಲು ಸಾಧ್ಯವಿಲ್ಲ ಎಂದು ಒಪ್ಪೋಣ. ಪ್ರಾಮಾಣಿಕವಾಗಿ ಬದುಕದಿದ್ದರೆ ಮಾತ್ರ ಗೆಲ್ಲಬಹುದೆಂದು ಯಾವ ಮಹಾಪುರುಷ ಎದೆತಟ್ಟಿ ಹೇಳಿ ಹಾಗೇ ಬರೆದು ಕೊಡುತ್ತಾನೆ?... ಹೋಗಲಿ... ನೀವೇ ಆದರೂ ಶಿಲಾಶಾಸನದಂತೆ ಘೋಷಿಸಿ ಬರೆದಿಟ್ಟು ಬದುಕಲು ಸಿದ್ಧವಿದ್ದೀರಾ?...
ಇಲ್ಲ... ಆ ತುಮುಲಕ್ಕೆ ಖಂಡಿತಾ ನಿಮ್ಮಲ್ಲಿ ಉತ್ತರವಿಲ್ಲ. ಇಂತಹ ತುಮುಲಕ್ಕೆ ಒಳಗಾದ ಮೇಲಾದರೂ ನಿಮ್ಮ ಮನಸ್ಸು ಪ್ರಾಮಾಣಿಕವಾದ ಬದುಕಿಗೆ ಯಾಕೆ ತೆರೆದುಕೊಳ್ಳಬಾರದು? ಅಕಸ್ಮಾತ್ ಗೆಲ್ಲದಿದ್ದರೆ ಎಂಬ ಪ್ರಶ್ನೆ ಎರಡೂ ಹಾದಿಗಳಲ್ಲಿ ದೀಪಸ್ತಂಭದಂತೆ ಸದಾ ಕಣ್ಣುಕುಕ್ಕುತ್ತಲೇ ಇರುತ್ತದೆ. ಗೆಲ್ಲದಿದ್ದಾಗ ಎರಡೂ ಹಾದಿಗಳಲ್ಲಿ ನಿರಾಸೆಯೂ ಆಗಬಹುದೇನೋ. ಆದರೆ, ಪ್ರಾಮಾಣಿಕ ಹಾದಿಯಲ್ಲಿ ಆತ್ಮತೃಪ್ತಿಯಾದರೂ ಇರುತ್ತದೆ. ಹೆಮ್ಮೆ ಇರುತ್ತದೆ. ಒಂದು ಸಣ್ಣ ತೃಪ್ತಿಯ ನಗುವಾದರೂ ಇರುತ್ತದೆ.
ನೆನಪಿರಲಿ ಗೆಳೆಯರೆ. ನಾವು ಪುಣ್ಯಕೋಟಿಯ ನಾಡಲ್ಲಿ ಬೆಳೆದವರು. ನಮ್ಮ ಬಾಲ್ಯಗಳಲ್ಲಿ ಪುಣ್ಯಕೋಟಿಯ ಕಥೆ ಕೇಳಿ ಆಕೆಯ ತಾಯ್ತನಕ್ಕೆ, ಕೊಟ್ಟ ಮಾತಿಗೆ ತಪ್ಪದ ಪ್ರಾಮಾಣಿಕತೆಗೆ, ಕೊನೆಗೂ ಆಕೆಗೇ ಜಯವಾದುದಕ್ಕೆ ಕಣ್ತುಂಬಿಕೊಂಡವರು. ಎಲ್ಲೋ ಒಂದು ಕ್ಷಣ ಆ ಎಳವೆಯಲ್ಲೇ ನಾನೂ ಪ್ರಾಮಾಣಿಕವಾಗಿಯೇ ಬದುಕುತ್ತೇನೆ ಎಂದು ಹಂಬಲಿಸಿದವರು. ಮುಂದೆ ಬದುಕಿನ ಹಾದಿಯುದ್ದಕ್ಕೂ ಅಲ್ಲಲ್ಲಿ ತೆರೆದುಕೊಂಡ ಕಲ್ಲುಮುಳ್ಳುಗಳು ನಮ್ಮ ಹಂಬಲಿಕೆ ನಿರ್ಧಾರಗಳನ್ನು ಕೊಂಚ ಬದಲಿಸಿರಬಹುದು. ಆದರೆ, ಆ ಕಷ್ಟಗಳು, ಸುಖದ ಲಾಲಸೆಗಳು ನಮ್ಮ ಇಡಿಯ ವ್ಯಕ್ತಿತ್ವವನ್ನೇ ಬದಲಿಸಿಬಿಡುತ್ತವೆ ಎಂದರೆ ತಪ್ಪಲ್ಲವೆ?...
ಗೆಳೆಯರೆ, ಜಗತ್ತಿನಲ್ಲಿ ಇನ್ನೂ ಬಹಳಷ್ಟು ಜನ ಪ್ರಾಮಾಣಿಕರಿದ್ದಾರೆ. ಅವರನ್ನು ಗುರುತಿಸುವ ಕಣ್ಣು ನಮ್ಮದಾಗಿರಬೇಕು. ನಮ್ಮ ನೋಟಕ್ಕೆ ತಕ್ಕಂತೆ ಜಗತ್ತು ಬದಲಾಗುತ್ತದೆ. ಅದರಲ್ಲಿ, ಅನುಮಾನವೇ ಬೇಡ. ಒಮ್ಮೆ ಗುರುಗಳಾದ ಕೃಪಾಚಾರ್ಯರು ದುರ್ಯೋಧನ, ಧರ್ಮರಾಯ ಇಬ್ಬರನ್ನೂ ಕರೆದು ಊರು ಸುತ್ತಾಡಿ ಬನ್ನಿ. ಜನರು ಮತ್ತು ಊರು ಹೇಗಿದೆ ತಿಳಿಸಿ ಎಂದರಂತೆ. ಸ್ವಲ್ಪ ಹೊತ್ತು ಸುತ್ತಾಡಿ ಬಂದ ದುರ್ಯೋಧನ ವ್ಯಗ್ರನಾಗಿ ಎಲ್ಲೆಲ್ಲಿಯೂ ಅನಾಚಾರ. ಯಾರೂ ಸರಿಯಾಗಿ ಬದುಕುತ್ತಿಲ್ಲ. ಎಲ್ಲೆಲ್ಲಿಯೂ ಕಳ್ಳಕಾಕರು, ಎಲ್ಲರೂ ಸೋಮಾರಿಗಳಾಗಿದ್ದಾರೆ. ಯಾರ ಮುಖದಲ್ಲಿಯೂ ಖುಷಿಯಿಲ್ಲ. ರಾಜ್ಯದ ವ್ಯವಸ್ಥೆಯೇ ಹಾಳಾಗಿ ಹೋಗಿದೆ. ಹೀಗಾದರೆ ಈ ರಾಜ್ಯಕ್ಕೆ ಭವಿಷ್ಯವಿಲ್ಲ ಎನ್ನುತ್ತಾನೆ. ಕೃಪಾಚಾರ್ಯರು ನೀನು ಹೇಳಿದ್ದು ಸರಿ ಎಂದು ಹೇಳಿಕಳಿಸುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಬಂದ ಧರ್ಮರಾಯ ಆಹಾ!... ಊರು ಸುಭಿಕ್ಷವಾಗಿದೆ. ಜನರೆಲ್ಲರೂ ಸಂತೋಷದಿಂದಿದ್ದಾರೆ. ಪ್ರತಿಯೊಬ್ಬರೂ ಅವರವರ ಜವಾಬ್ದಾರಿ ಅರಿತು ಬದುಕುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಉನ್ನತಿಯತ್ತ ಸಾಗುತ್ತಿದೆ ಎನ್ನುತ್ತಾನೆ. ಕೃಪಾಚಾರ್ಯರು ನೀನು ಹೇಳಿದ್ದು ಸರಿ ಎಂದು ಹೇಳಿಕಳಿಸುತ್ತಾರೆ. ಆಗ ಕೃಪಾಚಾರ್ಯರ ಪತ್ನಿ ರೇಗುತ್ತಾ ಏನಿದು?... ಇಬ್ಬರಿಗೂ ನೀನು ಹೇಳಿದ್ದೇ ಸರಿ ಎಂಬಂತೆ ಹೇಳಿಕಳಿಸಿದಿರಲ್ಲ. ಇಬ್ಬರಲ್ಲಿ ಯಾರು ಸರಿ?... ಎನ್ನುತ್ತಾರೆ. ಆಗ ಕೃಪಾಚಾರ್ಯರು ನಗುತ್ತಾ ಇಬ್ಬರೂ ಸರಿ, ಏಕೆಂದರೆ ಈ ಜಗತ್ತು ಎಲ್ಲಾ ಕಾಲದಲ್ಲೂ ಒಂದೇ ರೀತಿ ಇರುತ್ತದೆ. ಒಳ್ಳೆಯವರು ಕೆಟ್ಟವರು ಎಂಬ ಎರಡು ವರ್ಗಗಳು ಎಲ್ಲಾ ಕಾಲದಲ್ಲೂ ಒಟ್ಟಾಗಿಯೇ ಬದುಕುತ್ತಿವೆ. ಆದರೆ, ನೋಡುವವನ ದೃಷ್ಟಿಗೆ ತಕ್ಕಂತೆ ಲೋಕದ ಬಣ್ಣ ತೆರೆದುಕೊಳ್ಳುತ್ತಾ ಹೋಗುತ್ತದೆ. ದುರ್ಯೋಧನನ ಮನಸ್ಸು ಸದಾ ಕೆಟ್ಟದ್ದನ್ನೇ ಯೋಚಿಸುತ್ತದೆ. ಪ್ರತಿಯೊಂದರಲ್ಲೂ ಕೆಟ್ಟದ್ದನ್ನೇ ಕಾಣುತ್ತದೆ. ಹಾಗಾಗಿಯೇ ಜಗತ್ತಿನ ತುಂಬ ಕಳ್ಳಕಾಕರೇ ಕಾಣುತ್ತಾರೆ. ಧರ್ಮರಾಯ ವಿವೇಕಿ. ಸೌಜನ್ಯದ ಕಣ್ಣಿನಿಂದ ಜಗತ್ತನ್ನು ನೋಡುತ್ತಾನೆ. ಹಾಗಾಗಿಯೇ ಜಗತ್ತು ಆತನಿಗೆ ಪ್ರಾಮಾಣಿಕವಾಗಿ ಸುಂದರವಾಗಿ ಕಾಣುತ್ತದೆ. ಅಷ್ಟೆ ಎಂದು ಹೇಳಿ ಮುಗಿಸುತ್ತಾರೆ.
ಗೆಳೆಯರೆ,
ನಾವು ದುರ್ಯೋಧನರಲ್ಲ ; ಧರ್ಮರಾಯನಂಥವರು ಎಂದುಕೊಂಡು, ಅದನ್ನೇ ಆಚರಿಸುತ್ತಾ ಬಂದದ್ದನ್ನೆಲ್ಲ ಎದುರಿಸುವ ಪ್ರಯತ್ನ ಮಾಡೋಣ.
ಬೇರೆಯವರಿಂದ ಪ್ರಾಮಾಣಿಕತೆ ನಿರೀಕ್ಷಿಸುವ ಮೊದಲು ನಾವು ಪ್ರಾಮಾಣಿಕರಾಗಿರೋಣ. ಬೇರೆಯವರು ಅಪ್ರಾಮಾಣಿಕರಾಗಿ ಮುಂದೆ ಸಾಗಿದರೂ ನಾವು ಮನಸ್ಸು ಬದಲಿಸದೇ ಬದುಕೋಣ.
ಸಾಧನೆ ನಮ್ಮಂತವರಿಗಲ್ಲದೆ ಇನ್ನಾರಿಗೆ ಒಲಿಯುತ್ತದೆ? ನಂಬಿಕೆಯಿರದಿದ್ದರೆ ಯಾವುದೇ ಸಾಧಕರ ಬದುಕಿನ ಚರಿತ್ರೆಯನ್ನು ಬೇಕಾದರೂ ಓದಿ. ಇದು ಸತ್ಯಸ್ಯ ಸತ್ಯ.

No comments:

Post a Comment