Monday, December 27, 2010

"ಸಾಧನೆಯ ಹಾದಿಗೆ ಹುಮ್ಮಸ್ಸು ಹುಟ್ಟಲಿ..."

ಪ್ರತಿಯೊಬ್ಬರ ಜೀವನದಲ್ಲೂ ಬಹಳಷ್ಟು ಬಾರಿ ಇಂಥಾ ಸಂದರ್ಭಗಳು ಬಂದು ಹೋಗಿರುತ್ತವೆ. ಕೈಗೆ ಬಂದ ತುತ್ತು ಬಾಯಿ ಸೇರುವ ಮುನ್ನವೇ ನೆಲಕ್ಕೆ ಜಾರಿರುತ್ತದೆ; ಬಾಯಿಗೆ ಬಂದ ತುತ್ತು ಗಂಟಲಿಗಿಳಿವ ಮುನ್ನವೇ ಮಾಯವಾಗಿರುತ್ತದೆ; ಗಂಟಲಿನಿಂದ ಕೆಳಗಿಳಿದು ಹೊಟ್ಟೆ ಸೇರಿದ್ದರೂ ವಿಷದಂತಾಗುತ್ತದೆ; ಬಯಸಿದ್ದು ಸಿಗದೇ, ಸಿಕ್ಕಿದರೂ ಬಯಸಿದಂತೆ ಸಿಗದೇ, ಬಯಸಿದಂತೆ ಸಿಕ್ಕರೂ ನೆನೆಸಿದಂತೆ ನೆಮ್ಮದಿಯಾಗಿಡದೇ... ಛೆ!... ಭಗವಂತಾ!... ನೀನೆಷ್ಟು ಕ್ರೂರಿ?... ನಿನಗೇನಾದರೂ ಮನುಷ್ಯತ್ವ ಇದೆಯಾ?... ಅಸಲಿಗೆ ನೀನು ಬದುಕಿದ್ದೀಯಾ?... ಎಂದೆಲ್ಲಾ ತಲೆಚಚ್ಚಿಕೊಂಡು ಅಳುತ್ತಾ ಕೇಳಬೇಕೆನಿಸುತ್ತದೆ!...
ಒಂದು ಕ್ಷಣ ಆ ಭಾವವನ್ನು ಹೊರದೂಡಿ ಜಗತ್ತನ್ನೊಮ್ಮೆ ಕಣ್ತೆರೆದು ನೋಡಿದರೆ... ನಮಗಿಂತ ಅಸಹಾಯಕರು, ದುರ್ದೈವಿಗಳು, ರೋಗಿಷ್ಠರು, ಅಂಗವಿಕಲರು, ಮತಿಹೀನರು, ಮತಿಭ್ರಮಿತರು, ಎಲ್ಲ ಇದ್ದೂ ಬೀದಿಗೆ ಬಿದ್ದು ನರಳುತ್ತಿರುವವರು... ಇವರನ್ನೆಲ್ಲಾ ಗಮನಿಸುತ್ತಾ ಅವರ ಬಗ್ಗೆ ಯೋಚಿಸುತ್ತಾ ಬಂದಂತೆ... ಛೆ!... ಭಗವಂತಾ!... ನೀನೆಷ್ಟು ಕರುಣಾಮಯಿ!... ಏನೋ ಈ ಮಟ್ಟಕ್ಕಾದರೂ ನನ್ನನ್ನು ಇಟ್ಟಿದ್ದೀಯಲ್ಲ ಎಂದು ಕೈಮುಗಿಯಬೇಕೆನಿಸುತ್ತದೆ.
ಇದನ್ನೂ ಮೀರಿ ಇನ್ನೂ ಒಂದು ದೃಶ್ಯ ನಮಗೆ ಕಾಣಸಿಗುತ್ತದೆ. ಕೈಯಿಲ್ಲದವರು, ಕಾಲಿಲ್ಲದವರು, ಎರಡೂ ಕಳೆದುಕೊಂಡವರು, ಜೊತೆಗೆ ಕಣ್ಣು, ಮೂಗು, ಕೈ ಬಾಯಿ ಕಳೆದುಕೊಂಡವರು... ಆ ಬದುಕೊಂದು ಬದುಕೇ ಅಲ್ಲ ಎಂಬಂತೆ ಇದ್ದರೂ... ಅಂಥಹಾ ಸಂಕಷ್ಟಗಳೆಲ್ಲವನ್ನೂ ಮೀರಿ ಅದರಲ್ಲೇ ಅದ್ವಿತೀಯ ಸಾಧನೆ ಮಾಡಿದಂಥವರು ಇರುತ್ತಾರಲ್ಲ... ಹೆಲೆನ್ ಕೆಲ್ಲೆರ್, ಸ್ಟೀಫನ್ ಹಾಕಿಂಗ್... ಹೀಗೆ ಇನ್ನೂ ಮುಂತಾದ ಮಹಾತ್ಮರು... ಅಂಥವರನ್ನು ಕಂಡಾಗ...
ಆಗ... ಛೆ!... ನಮ್ಮದೂ ಒಂದು ಜನ್ಮವಾ?... ಎಷ್ಟೆಲ್ಲಾ ಕಷ್ಟ, ನಷ್ಟ ನೋವುಗಳನ್ನು ಮೀರಿ ಎಲ್ಲ ಇದ್ದೂ ಕೊರಗುತ್ತಾ ಕೂರುವ ನಮ್ಮಂಥವರ ಕೆನ್ನೆಗೆ ಹೊಡೆದಂತೆ ಏನೇನೋ ಸಾಧಿಸಿದ ಆ ಮಹಾತ್ಮರನ್ನು ಕಂಡಾಗ, ಅವರಿಗೆ ಸೆಟೆದು ನಿಂತು ಸೆಲ್ಯೂಟ್ ಮಾಡಬೇಕೆನಿಸುತ್ತದೆ. ಇನ್ನ್ನು ಕೊರಗಿದ್ದು ಸಾಕು, ನಾನೂ ಕೂಡಾ ಏನಾದರೂ ಸಾಧಿಸಲೇಬೇಕು ಎಂಬ ಹಠ, ಛಲ, ಸಂಕಲ್ಪ, ಆಕ್ರೋಶ ಎಲ್ಲವೂ ಮಡುಗಟ್ಟುತ್ತದೆ. ಆಗ...
ದಯವಿಟ್ಟು ಆ ಕ್ಷಣಗಳನ್ನು ಹಾಗೇ ಹಿಡಿದಿಟ್ಟುಕೊಳ್ಳಿ. ಅಲ್ಲಿಂದ ನಿಮ್ಮ ಮನಸ್ಸು ಅತ್ತಿತ್ತ ಕದಲದೇ ಇರಲಿ. ಕಣ್ಣ ಮುಂದೆ ಗುರಿಯೊಂದನ್ನು ಕೇಂದ್ರೀಕರಿಸಿಕೊಂಡು, ಟೀಕೆಗಳಿಗೆ ಅಂಜದೇ, ಅಳುಕದೇ, ಅಧೀರರಾಗದೇ, ಧೃಡವಾಗಿ ಪಯಣ ಹೊರಟುಬಿಡಿ. ಸಾಧನೆಯ ಹಾದಿ ನಿಮ್ಮ ಕಣ್ಮುಂದೆ ತೆರೆದುಕೊಂಡಿರುತ್ತದೆ. ಆ ಹಾದಿಯಲ್ಲಿ... ಹಾಂ!... ಗೆಳೆಯರೇ ಸಾಧನೆಯ ಹಾದಿಯಲ್ಲಿನ ಆರು ಗೆಳೆಯರಲ್ಲಿ ಗುರಿ, ಶ್ರಮ, ಶ್ರದ್ಧೆ ಎಂಬ ಮೂವರು ಗೆಳೆಯರ ಪರಿಚಯ ನಿಮಗಾಗಿತ್ತಲ್ಲ. ಈಗ ನಾಲ್ಕನೆಯ ಗೆಳೆಯ ’ಸಹನೆ’ಯನ್ನು ಪರಿಚಯಿಸಿಕೊಳ್ಳೋಣ ಬನ್ನಿ.
ಈ ಗೆಳೆಯನ ಬಗ್ಗೆ ಏನು ಹೇಳುವುದು?... ಎಷ್ಟು ಹೇಳುವುದು?... ಏಕೆಂದರೆ ಈತ ನಿಮಗೆ ಅಪರಿಚಿತನೇನೂ ಖಂಡಿತಾ ಅಲ್ಲ. ಬಹಳಷ್ಟು ಬಾರಿ ಜೀವನದ ಬಹಳಷ್ಟು ಸಂದರ್ಭದಲ್ಲಿ ಈ ಗೆಳೆಯ ನಮ್ಮ ಕೈಬಿಟ್ಟು ಹೋದಾಗಲೇ ಅಲ್ಲವೇ... ನಾವು ಕೆಟ್ಟು ಹೊಲಗೆಟ್ಟು ಬಿಕ್ಕಳಿಸಿ ಬಸವಳಿದು ಬಿದ್ದಿರುವುದು. ಹೌದೌದು. ಈ ಗೆಳೆಯ ಸಾಧನೆಯ ಹಾದಿಗೆ ಮಾತ್ರ ಅಲ್ಲ... ಬದುಕಿನ ಹಾದಿಗೇ ದಾರಿದೀಪ.
"ತಾಳ್ಮೆ ಇದ್ದವನು ಮಾತ್ರ ಅಂದುಕೊಂಡಿದ್ದನ್ನು ಸಾಧಿಸಬಲ್ಲ" ಎಂದು ಬೆಂಜಮಿನ್ ಫ್ರಾಂಕ್ಲಿನ್ ಹೇಳುತ್ತಾನೆ. "ತಾಳ್ಮೆ ಇದ್ದವರಲ್ಲಿ ಮಾತ್ರ ಜ್ಞಾನ ಕೈಜೋಡಿಸುತ್ತದೆ" ಎಂದು ಸೇಂಟ್ ಆಗಸ್ಟಿನ್ ಹೇಳುತ್ತಾನೆ. ಅಷ್ಟೇ ಯಾಕೆ?... ತಾಳಿದವನು ಬಾಳಿಯಾನು ಎಂಬ ಗಾದೆ ನಿಮಗೆಲ್ಲರಿಗೂ ಗೊತ್ತೇ ಇದೆ. ಇದೆಲ್ಲಾ ಗೊತ್ತಿದ್ದೂ ಕೂಡಾ ನಾವು ಅನೇಕ ಸಂದರ್ಭಗಳಲ್ಲಿ ಎಡವುತ್ತೇವೆ. ಎಡವಿದ್ದಕ್ಕೆ ಪಶ್ಚಾತ್ತಾಪ ಪಡುತ್ತೇವೆ. ಮತ್ತೆಂದೂ ತಾಳ್ಮೆ ಸಹನೆ ಕಳೆದುಕೊಳ್ಳಬಾರದೆಂದು ನಿರ್ಧರಿಸುತ್ತೇವೆ. ಆದರೆ... ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತೇವೆ!... ಹಾದಿತಪ್ಪುತ್ತೇವೆ!...
ಈ ಸಾಧನೆಯ ಹಾದಿಯಲ್ಲಿ ಸಹನೆಯ ಪಾತ್ರ ತುಂಬ ದೊಡ್ಡದು. ಹಿಂದೆಲ್ಲಾ, ಗುರುವೊಬ್ಬ ಸಾಧನೆಯ ಹಾದಿಯಲ್ಲಿ ನಡೆಯಲು ಬಯಸಿ ಬಂದ ಶಿಷ್ಯರಿಗೆ ಇನ್ನಿಲ್ಲದಷ್ಟು ಪರೀಕ್ಷೆಗಳನ್ನಿಟ್ಟು ಕಾಡಿಸಿ ಪೀಡಿಸಿ ಆತನ ಸಹನೆಯನ್ನು ಪರೀಕ್ಷಿಸುತ್ತಿದ್ದ. ಅದೆಲ್ಲಾ ನೋವು ಸಂಕಟಗಳನ್ನು ಮೀರಿ ಸಹನೆಯಿಂದ ನಿಂತವನಿಗೆ ಮಾತ್ರ ಜ್ಞಾನಭಿಕ್ಷೆ ದೊರೆಯುತ್ತಿತ್ತು. ಈಗ ಯಾವ ವಿದ್ಯೆ ಕಲಿಯಲೂ ಕೂಡಾ ಅಂಥಹಾ ಯಾವ ಪರೀಕ್ಷೆಗಳೂ ಇಲ್ಲ. ಈಗಿನದು ಮುಕ್ತ ವ್ಯಾಪಾರದ ಮುಕ್ತ ವಿದ್ಯೆ. ಹಾಗಾಗಿಯೇ, ಆ ವಿದ್ಯೆಯ ಬಗ್ಗೆ ಇರಬೇಕಾದ ಗೌರವ ಭಯ ಭಕ್ತಿ ಮಾಯವಾಗುತ್ತಿದೆ. ಇರಲಿ ಆ ವಿಷಯ ಬದಿಗಿಡೋಣ.
ಚಿತ್ರರಂಗದ ವಿಚಾರಕ್ಕೆ ಬಂದರೆ ಆ ರಂಗವೇ ಒಂದು ರೀತಿಯಲ್ಲಿ ಮಹಾಗುರು. ಈ ಮಹಾಗುರು ನಿಮ್ಮನ್ನು ಇನ್ನಿಲ್ಲದ ರೀತಿಯಲ್ಲಿ ಕಾಡುತ್ತಾನೆ, ಪೀಡಿಸುತ್ತಾನೆ ಎಂಬುದರಲ್ಲಿ ಸಂಶಯವೇ ಬೇಡ. ಆದರೆ, ಹಾಗೆ ಎಷ್ಟೇ ಕಾಡಿದರೂ, ಹಿಂಡಿ ಹಿಪ್ಪೆ ಮಾಡಿದರೂ ಗೊಣಗದೆ ಬೇಸರಿಸದೆ ಸಹನೆಯ ಹಾದಿಯಲ್ಲಿ ನಡೆಯಬೇಕಾದದ್ದು ನಮ್ಮ ಕರ್ತವ್ಯವಾಗಬೇಕಾಗುತ್ತದೆ. ಧರ್ಮವಾಗಬೇಕಾಗುತ್ತದೆ. ಸಹನೆ ಎಂಬುವನು ನಿಸ್ವಾರ್ಥ ಸೇವಕನಿದ್ದಂತೆ. ಆದರೆ, ಬಹಳಷ್ಟು ಜನ ಆ ಸೇವಕನಿಗೆ ಕರೆದು ಕೆಲಸ ಕೊಡುವ ಪ್ರಯತ್ನವನ್ನೇ ಮಾಡುವುದಿಲ್ಲ. ಗೆಳೆಯನೆಂಬ ರೀತಿಯಲ್ಲಿಯೂ ಸ್ವೀಕರಿಸುವುದೇ ಇಲ್ಲ.
ನಿಜಕ್ಕೂ ಸಹನೆ ಎಂದರೆ ಏನು? ಸುಮ್ಮನಿರುವುದು ಎಂದಷ್ಟೆಯಾ? ಇಲ್ಲ... ಸಹನೆ ಎಂದರೆ ಸುಮ್ಮನಿದ್ದಾಗ ಸುಮ್ಮನಿರುವುದಲ್ಲ. ಸುಮ್ಮನಿರಲಾಗದಂತಹ ಅತೀವ ಒತ್ತಡದಲ್ಲಿಯೂ ಸ್ಥಿಮಿತ ಕಳೆದುಕೊಳ್ಳದಂತೆ ಸುಮ್ಮನಿರುವುದು. ಹೊಟ್ಟೆ ತುಂಬಿದ ಮೇಲೆ ನಾಲ್ಕು ಗಂಟೆ ಉಪವಾಸ ಮಾಡುವುದಲ್ಲ. ಹಸಿವಿದ್ದಾಗಲೂ ನಾಲ್ಕುಗಂಟೆ ಉಪವಾಸ ಕೂರುವುದು. ಇನ್ನೂ ತುಂಬ ಗಟ್ಟಿಯಾಗಿ ಹೇಳುವುದಾದರೆ ಆ ಕ್ಷಣದ ಸಹನೆಯಿಂದ ಗೆದ್ದೆ ಎಂದುಕೊಳ್ಳುವುದಲ್ಲ. ಸಹನೆಯಿಂದಲೇ ಬದುಕು ರೂಪಿಸಿಕೊಂಡು ಸಾಧನೆಯ ಶೃಂಗವೇರಿ ನಿಲ್ಲುವುದು.
ಹಾಗಂತ... ತಾಳ್ಮೆ ಸಹನೆಗಳಿದ್ದರೆ ಮಾತ್ರ ಗೆಲ್ಲಬಹುದು ಅಂತೇನಿಲ್ಲ. ಅದು ಇಲ್ಲದೆಯೂ ಗೆದ್ದವರಿದ್ದಾರೆ. ಆದರೆ, ಗೆದ್ದಮೇಲೆ ಅಲ್ಲಿಯೇ ಹಾಗೇ ನಿಂತವರ ಉದಾಹರಣೆ ಇಲ್ಲ. ಗೆಲ್ಲುವುದು ಸಾಧನೆಯಲ್ಲ, ಗೆಲ್ಲುತ್ತಲೇ ಇರುವುದು ಸಾಧನೆ. ಅಂತಹ ಸಾಧನೆ ರೂಪಿತವಾಗಬೇಕಾದರೆ ಅದಕ್ಕೆ ಸಹನೆಯ ಬೆಂಬಲ ಬೇಕೇ ಬೇಕು ಎಂಬುದು ಮಾತ್ರ ನೆನಪಿನಲ್ಲಿರಲಿ. ಹೀಗೆ ಸಾಧನೆಯ ಹಾದಿಯಲ್ಲಿ ಹೊರಟ ನಮಗೆ ಸಹನೆಯಿಂದಲೇ ಮತ್ತೆ ಮತ್ತೆ ಪುನರ್ಜನ್ಮ ಪಡೆದ ಅಮಿತಾಭ್‌ರಂತವರಾಗಲೀ, ತಮಿಳಿನ ವಿಕ್ರಂರಂತವರಾಗಲೀ, ಖಂಡಿತಾ ಆದರ್ಶವಾಗಬೇಕು. ಕಣ್ಣಿಗೆ ಕಾಣುವ ಕನ್ನಡದ ಅನೇಕ ಕಲಾವಿದರು ಮಾದರಿಯಾಗಬೇಕು. ಅಷ್ಟೇ ಅಲ್ಲ, ಈ ಚಲನಚಿತ್ರರಂಗವನ್ನು ಬಿಟ್ಟು ಇನ್ನಿತರ ರಂಗಗಳಲ್ಲಿ ಸಾಧನೆ ಮಾಡಿದವರೂ ಕೂಡಾ ಸ್ಫೂರ್ತಿಯಾಗಬೇಕು. ಅದಕ್ಕೆಂದೇ... ಕಣ್ಣಿಲ್ಲದೆ, ಕಿವಿಯಿಲ್ಲದೆ, ಮಾತನಾಡಲೂ ಬಾರದೇ ಇದ್ದರೂ ಜಗತ್ತಿಗೇ ಕಣ್ಣು ತೆರೆಯಿಸಿದ ಹೆಲೆನ್ ಕೆಲೆರ್‌ಳಂತಹ ವ್ಯಕ್ತಿತ್ವವನ್ನು ಆರಂಭದಲ್ಲೇ ಪ್ರಸ್ತಾಪಿಸಿದ್ದು. ಕಣ್ಣು, ಮಿದುಳು ಮತ್ತು ಒಂದೇ ಒಂದು ತೋರು ಬೆರಳು ಬಿಟ್ಟು ದೇಹದ ಇನ್ನಾವುದೇ ಭಾಗ ಕೆಲಸ ಮಾಡದೇ ಇದ್ದರೂ ವಿಜ್ಞಾನ ಲೋಕದಲ್ಲಿ ಅಪ್ರಥಮ ಸಾಧನೆ ಮಾಡಿರುವ, ಈಗಲೂ ನಮ್ಮ ಕಣ್ಮುಂದೆ ಇದ್ದು ಜೀವಂತ ದಂತಕಥೆಯಂತಾಗಿರುವ ಸ್ಟೀಫನ್ ಹಾಕಿಂಗ್‌ರ ಹೆಸರು ಪ್ರಸ್ತಾಪಿಸಿದ್ದು. ಇಂಥವರ ಬಗ್ಗೆ ಏನೂ ಗೊತ್ತಿಲ್ಲವೆಂದರೆ ದಯವಿಟ್ಟು ಇಂದೇ ಅವರ ಬದುಕಿನ ಕಥೆಯನ್ನು ಹುಡುಕಿ ಓದಿ ಅರಿಯಲು ಯತ್ನಿಸಿ. ಸಾಧನೆಯ ಹಾದಿಗೆ ಹುಮ್ಮಸ್ಸು ಹುಟ್ಟುತ್ತದೆ. ಸಹನೆಯ ಅಗತ್ಯದ ಅರಿವು ತಾನೇ ತಾನಾಗಿ ನಿಮ್ಮದಾಗುತ್ತದೆ.
- ಇದು ’ಪ್ರೀತಿ’ಯಿಂದ,

No comments:

Post a Comment