Tuesday, December 28, 2010

ನಿಮ್ಮ ಸಾಧನೆಯ ಹಾದಿಯ ಪಯಣ ಹೇಗಿದೆ?... ಇಲ್ಲಿಯವರೆಗೆ ನಿಮ್ಮ ಪಯಣದ ಆರು ಜೊತೆಗಾರರನ್ನು ಪರಿಚಯಿಸಿಕೊಂಡಿದ್ದೀರಿ. ಅವರೆಲ್ಲರ ಸಹವಾಸ ನಿಮ್ಮಲ್ಲಿ ಹೊಸ ಹುರುಪು ಉತ್ಸಾಹ ತುಂಬಿದೆಯೆಂದು ನಂಬಿದ್ದೇನೆ.
ಬೆಳಗಾಗ ಎದ್ದು ಯಾರ‍್ಯಾರ ನೆನೆಯಾಲೀ...
ಒಂದು ಜನಪ್ರಿಯ ಜಾನಪದ ಹಾಡಿನ ಸಾಲಿದು. ನೀವೆಲ್ಲರೂ ಕೇಳಿರುತ್ತೀರಿ. ಆ ಸಾಲಿನಿಂದಲೇ ಮಾತು ಆರಂಭಿಸೋಣ. ಹಾಂ!... ಇದು ಕೇವಲ ಮಾತಿನ ವಿಚಾರಕ್ಕಲ್ಲ. ನಮ್ಮ ಬದುಕಿನ ದಿನಚರಿಯ ಮೊದಲ ಕಾರ್ಯ.
ಪ್ರತಿ ಬೆಳಗೂ ಕೂಡ ನಮ್ಮ ಪಾಲಿಗೆ ಒಂದು ಮರುಜನ್ಮ. ಅಂಥಹಾ ಒಂದು ಭಾವನೆ ಉದಯಿಸಲೆಂದೇ ಉದಯ ತನ್ನ ಹೃದಯ ತೆರೆದು ಹೊಂಗಿರಣಗಳಿಂದ ಭೂಮಿಯನ್ನು ತುಂಬಿಸುತ್ತಾನೆ. ಆ ಉದಯಕಾಲದ ಸೊಬಗಿಗೆ ಪಕ್ಷಿಗಳು ಸ್ಪಂದಿಸುವಂತೆ ನಮ್ಮಲ್ಲಿಯೂ ಅಂಥಹ ಸಂಭ್ರಮ ಸಡಗರ ಉಂಟಾಗಬೇಕು. ಒಳ್ಳೆಯ ವಿಚಾರ ಹುಟ್ಟಬೇಕು. ಅದಕ್ಕಾಗಿಯೇ, ನಮ್ಮ ಹಿರಿಯರು ಎದ್ದ ತಕ್ಷಣ ಒಳ್ಳೆಯದೆಲ್ಲವನ್ನೂ ಒಮ್ಮೆ ನೆನೆಯಲಿ ಎಂದು ಬಯಸಿ ಬೆಳಗಾಗ ಎದ್ದು ಶಿವನಾ ನೆನೆದೇನಾ. ಎಂದು ಹಾಡುತ್ತಾರೆ. ಅಲ್ಲಿಂದ ಮುಂದುವರೆದು ಭೂಮಾತೆ, ಗೋಮಾತೆ, ಜನ್ಮದಾತೆ, ಗುರುಹಿರಿಯರೆಲ್ಲರನ್ನೂ ನೆನೆಯಲು ಹೇಳುತ್ತಾರೆ.
ಎಲ್ಲರನ್ನೂ ಒಮ್ಮೆ ನೆನೆಯುತ್ತೀರೋ ಇಲ್ಲವೋ... ಆದರೆ ಸದಾ ಸಾಧನೆಯ ಹಾದಿಗೆ ತುಡಿಯುವ ನಾವೂ ನೀವೂ... ಪ್ರತಿದಿನ ಯಾರಾದರೊಬ್ಬ ಸಾಧಕರನ್ನು ನೆನೆದರೆ ಎಷ್ಟು ಹಿತಕರವಾಗಿರುತ್ತದೆಯಲ್ಲವೆ?...ಹೌದು. ನಮ್ಮ ಪ್ರತಿಬೆಳಗೂ ಕೂಡ ಯಾರಾದರೊಬ್ಬ ಸಾಧಕನನ್ನು ನೆನೆಯುವುದು ಬಹಳ ಒಳ್ಳೆಯದು. ಅವರ ಬದುಕು, ಕಾರ್ಯಶೈಲಿ, ಶಿಸ್ತು, ಸಮಯಪ್ರಜ್ಞೆ, ಕಷ್ಟನಷ್ಟಗಳು ಎಷ್ಟೇ ಬಂದರೂ ಎದುರಿಸಿ ನಡೆದ ದಿಟ್ಟತನ, ಅದಕ್ಕೆ ಸಂಬಂಧಪಟ್ಟ ಸಾಲು ಸಾಲು ಘಟನೆಗಳು ಇದೆಲ್ಲವೂ ಕಣ್ಮುಂದೆ ಸಾಲುಸಾಲಾಗಿ ಸಾಗಿ ಹೋಗುವಾಗ...
ಸಾಕು... ಹತ್ತೇ ಹತ್ತು ನಿಮಿಷ ಧ್ಯಾನದಂತೆ ಕುಳಿತು ಯೋಚಿಸಿದರೂ ಸಾಕು!... ಮನಸ್ಸು ಪ್ರಪುಲ್ಲಿತವಾಗುತ್ತದೆ. ತಾನೇ ತಾನಾಗಿ ನಿಮಗೇ ಅರಿವಾಗದಂತೆ ತುಟಿಯಂಚಿನಿಂದ ಮುಗುಳ್ನಗೆಯೊಂದು ಜಾರುತ್ತದೆ. ಮನಸ್ಸು ಅವರ ಬದುಕಿನ ಪುಟಗಳಿಗೂ ನಿಮ್ಮ ಬದುಕಿನ ಪುಟಗಳಿಗೂ ತಾಳೆ ಹಾಕುತ್ತದೆ. ಅವಕಾಶಗಳ ಅನಂತ ಆಕಾಶದ ಕಡೆಗೆ ನಿಮ್ಮ ಕಣ್ಣು ತಿರುಗಿಸುತ್ತದೆ. ಹುರಿದುಂಬಿಸುತ್ತದೆ. ನಿಮ್ಮೆಲ್ಲ ಸಿಟ್ಟು ಸೆಡವು ಹತಾಶೆ ನೋವುಗಳನ್ನು ಎದೆಯೊಳಗಿಂದ ಎಳೆದು ಒಂದು ದೀರ್ಘವಾದ ಉಸಿರ ಮೂಲಕ ಹೊರಚೆಲ್ಲಿ ಮೈಮನಸ್ಸು ಹಗುರವಾಗುವಂತೆ ಮಾಡುತ್ತದೆ.
ಅಷ್ಟು ಸಾಕಲ್ಲ!?...
ಆಹಾ!... ಈಗ ಕಣ್ತೆರೆದು ನೋಡಿ. ಈ ಜಗತ್ತು ಎಷ್ಟು ಸುಂದರವಾಗಿದೆ!?... ಇರಲಿ. ನಿನ್ನೆಯ ರಾತ್ರಿ ಊಟ ಸಿಕ್ಕದೆ ಹಸಿದು ಮಲಗಿದ್ದು ಫಕ್ಕನೆ ನೆನಪಾಗಬಹುದು. ಆದರೆ ಅದನ್ನು ಬದಿಗೊತ್ತಿ. ಯಾರಾರೋ ಬೇಡವಾದ ಮುಖಗಳೆಲ್ಲ ಮುಂದೆ ಬರುತ್ತಾ ಕಿರಿಕಿರಿಯಾಗಬಹುದು. ಆದರೆ, ಕಣ್ಮುಂದೆ ಕೆಲವೇ ನಿಮಿಷಗಳ ಹಿಂದೆ ಬಂದು ನಿಂತಿದ್ದ ಸಾಧಕನ ಕಡೆಗೊಮ್ಮೆ ನೋಡಿ. ಅಷ್ಟೆ. ಮೈಕೊಡವಿ ಮೇಲೆದ್ದು ನಿಮ್ಮ ಸಾಧನೆಯ ಹಾದಿಯ ಕಡೆ ತಿರುಗಿಕೊಳ್ಳಿ.
ಅದನ್ನು ಬಿಟ್ಟು ’ಅಯ್ಯೋ... ಮತ್ತೆ ಶುರುವಾಯಿತಾ ಈ ಹೊಡಬಾಳ ಬದುಕು’ ಎಂದು ನಿಟ್ಟುಸಿರಿಟ್ಟರೆ ಇಡೀ ದಿವಸದ ಪ್ರತಿಕ್ಷಣವೂ ಹುಳಿಹುಳಿ ಕಸಿವಿಸಿ. ಬಹಳಷ್ಟು ಜನರಿಗೇ ಇದೇ ದೊಡ್ಡ ಸಮಸ್ಯೆ. ಎಷ್ಟೇ ಬುದ್ದಿ ಇದ್ದರೂ, ಎಷ್ಟೇ ಶಕ್ತಿ ಇದ್ದರೂ ಗೆಲ್ಲಬಲ್ಲ ಸಾಮರ್ಥ್ಯವಿದ್ದರೂ ಪದೇ ಪದೇ ’ಅಯ್ಯೋ...’ ಎನ್ನುತ್ತಾ, ನಿಟ್ಟುಸಿರಿಡುತ್ತಾ ಕಾಲೆಳೆದುಕೊಂಡೇ ಓಡಾಡುತ್ತಾರೆ.
ಇದು ಯಾವುದೇ ಸಾಧಕನ ಮನಸ್ಸಿಗೆ ಬರಬಾರದ ರೋಗ. ಇದಕ್ಕೆ ’ಸ್ವಮರುಕ’ ಎನ್ನುತ್ತಾರೆ. ನನ್ನ ಕಷ್ಟಕ್ಕೆ ಯಾರೂ ’ಅಯ್ಯೋ ಪಾಪ’ ಎನ್ನುವವರು ಇಲ್ಲವಲ್ಲಾ ಎಂದು ಇಡೀ ಜಗತ್ತಿಗೇ ಹಿಡಿಹಿಡಿ ಶಾಪ ಹಾಕಿ ತಮಗೆ ತಾವೇ ’ಅಯ್ಯೋ ಪಾಪ’ ಎಂದು ಒಂದು ಹಿಡಿ ಮರುಕ ನೀಡಿಕೊಳ್ಳುತ್ತಾರೆ. ನನ್ನ ಪ್ರತಿಭೆ ಯಾರೂ ಗುರುತಿಸುವವರಿಲ್ಲ ಎಂದು ಹಲುಬುತ್ತಾರೆ. ತಮಗೆ ತಾವೇ ’ಹೌದು ಕಣೋ. ಈ ಜಗತ್ತಿಗೆ ಬುದ್ದಿ ಇಲ್ಲ’ ಎಂದು ಸಮಾಧಾನಿಸಿಕೊಳ್ಳುತ್ತಾರೆ. ನನ್ನನ್ನು ಯಾರೂ ಪ್ರೀತಿಸುವರಿಲ್ಲ ಎಂದು ಗೋಳಿಡುತ್ತಾರೆ. ’ಹೌದು ಕಣೋ. ನಿನ್ನ ಬೆಲೆ ಯಾರಿಗೂ ಗೊತ್ತಿಲ್ಲ’ ಎಂದು ತಮಗೆ ತಾವೇ ತಲೆಸವರಿಕೊಳ್ಳುತ್ತಾರೆ. ಈ ಜಗತ್ತಲ್ಲಿ ನಾನು ತುಂಬ ಒಂಟಿ. ನನ್ನ ನೋವು ಬೇರೆ ಯಾರಿಗೂ ಇಲ್ಲ ಎಂದು ಅಳುತ್ತಾ ಹೊದ್ದು ಮಲಗುತ್ತಾರೆ. ’ಹೌದೌದು ಕಣೋ. ನಿನಗೂ ಒಂದು ಕಾಲ ಬರುತ್ತೆ. ಸಮಾಧಾನ ಮಾಡ್ಕೋ’ ಅಂತ ತಮಗೆ ತಾವೇ ತಟ್ಟಿ ಮಲಗಿಸಿಬಿಡುತ್ತಾರೆ.
ಸ್ವಮರುಕ ಎಂದರೆ ಇದೇ. ಸೆಲ್ಫ್‌ಪಿಟಿ ಎಂದೂ ಹೇಳಬಹುದು. ಇದು ಬಹುತೇಕ ಶೇಕಡಾ ಎಂಭತ್ತರಷ್ಟು ಸಾಮಾನ್ಯ ಜನರ ಸಾಮಾನ್ಯ ರೋಗ. ಆದರೆ ಶೇ. ಹತ್ತರಷ್ಟು ಜನ ಹಾಗೆ ಯೋಚಿಸುವುದಿಲ್ಲ. ಹಾಗಾಗಿಯೇ ಅವರು ಸಾಧಕರಾಗುತ್ತಾರೆ. ನಾವು ಆ ಹತ್ತರಲ್ಲಿ ಒಬ್ಬರಾಗಬೇಕೇ ಹೊರತು ಎಂಭತ್ತರಲ್ಲಿ ಒಬ್ಬರಾಗಬಾರದು. ಅದಕ್ಕಾಗಿ ನಮ್ಮ ಚಿಂತನಾಧಾಟಿಯನ್ನೇ ಬದಲಿಸಿಕೊಳ್ಳಬೇಕು.
ಅದು ಬಹಳ ಸುಲಭ ! ಹೀಗೆ ಯೋಚಿಸಿ.
’ನನ್ನ ಪ್ರತಿಭೆ ಯಾರೂ ಗುರುತಿಸುವವರಿಲ್ಲ’ ಎಂದು ಹಲುಬುವ ಬದಲು ಎಲ್ಲರೂ ಗುರುತಿಸುವಷ್ಟು ನಾನು ನನ್ನ ಪ್ರತಿಭೆಯನ್ನು ಬೆಳೆಸಿಕೊಳ್ಳುತ್ತಿಲ್ಲ, ಬಳಸಿಕೊಳ್ಳುತ್ತಿಲ್ಲ. ಅದು ಮೊದಲು ಆಗಬೇಕಾದ ಕೆಲಸ ಎಂದು ಯೋಚಿಸುಬಹುದಲ್ಲ !... ’ನನ್ನ ಪ್ರತಿಭೆ ಗುರುತಿಸದ ಜಗತ್ತಿಗೇ ಬುದ್ದಿ ಇಲ್ಲ’ ಎಂದು ಬೈದುಕೊಳ್ಳುವ ಬದಲು ’ಈ ಜಗತ್ತು ಗುರುತಿಸುವಂತೆ ಮಾಡುವುದು ಹೇಗೆ ?’ ಎಂದು ಚಿಂತಿಸಿ ಬುದ್ಧಿವಂತರಾಗಬಹುದಲ್ಲ !... ’ನನ್ನನ್ನು ಯಾರೂ ಪ್ರೀತಿಸುವವರಿಲ್ಲ’ ಎಂದು ಗೋಳಿಡುವ ಬದಲು ’ಯಾರು ಪ್ರೀತಿಸಬೇಕು ?... ಯಾಕೆ ಪ್ರೀತಿಸಬೇಕು ?... ಎಷ್ಟು ಪ್ರೀತಿಸಬೇಕು ?... ಪ್ರೀತಿಸದಿದ್ದರೆ ನನಗಾಗುವ ನಷ್ಟ ಏನು ?... ಸುಮ್ಮನೇ ಹೀಗೇ ವ್ಯರ್ಥವಾಗಿ ನೊಂದುಕೊಳ್ಳುತ್ತಾ ಕುಳಿತರೆ ಅದರಿಂದಾಗುವ ನಷ್ಟ ಏನು ?... ಗೆದ್ದವರಿಗೆ ಕೇಳದೇನೇ ಪ್ರೀತಿ ದೊರೆಯುತ್ತದೆ. ಸೋತವನಿಗೆ ಬೇಡಿದರೂ ಪ್ರೀತಿ ಒಲಿಯುವುದಿಲ್ಲ. ಗೆಲ್ಲುವುದಷ್ಟೇ ನನಗೆ ಮುಖ್ಯವಾಗಬೇಕು ಎಂದೇಕೆ ಚಿಂತಿಸಬಾರದು ?...
ಈ ಜಗತ್ತಲ್ಲಿ ನಾನು ತುಂಬಾ ಒಂಟಿ ಎನ್ನುವುದರ ಬದಲು, ಜಗತ್ತಿನಲ್ಲಿ ಎಲ್ಲರೂ ಒಂಟಿಯೇ. ಅವರವರ ಭಾರ ಅವರವರೇ ಹೊರಬೇಕು. ಅವರವರ ಹಣೆಬರಹ ಅವರವರೇ ಬರೆದುಕೊಳ್ಳಬೇಕು. ಎಲ್ಲರಿಗಿಂತ ನಾನೇನು ಬೇರೆ ಅಲ್ಲ. ನಾನೊಬ್ಬನೇ ನೋವು ಅನುಭವಿಸುತ್ತಿಲ್ಲ, ಬದುಕಲು ಬಯಸುವ ಪ್ರತೀ ಜೀವಿಗೂ ನೋವು ಅನಿವಾರ್ಯ ಎಂದು ಚಿಂತಿಸಬಹುದಲ್ಲಾ ?... ಸುಮ್ಮನೇ ಅಳುತ್ತಾ ಹೊದ್ದು ಮಲಗುವ ಬದಲು, ನನಗೂ ಒಂದು ಕಾಲ ಬರುತ್ತದೆ ಅಂತ ಸುಳ್ಳು ಸುಳ್ಳೇ ಸಮಾಧಾನ ಮಾಡಿಕೊಳ್ಳುತ್ತಾ ಏನೇನೂ ಪ್ರಯತ್ನ ಮಾಡದೆ ಬಿದ್ದುಕೊಳ್ಳುವ ಬದಲು,ದೆ ಸೆಟೆದು ಮೇಲೆದ್ದು ಕಾಲಕ್ಕಾಗಿ ಕಾಯದೆ ಹೊಸ ಹೊಸ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳಬಹುದಲ್ಲ !...
ಗೆಳೆಯರೇ... ಇದನ್ನು ಪಾಸಿಟಿವ್ ಥಿಂಕಿಂಗ್ ಎಂದು ಕರೆಯುತ್ತಾರೆ. ಆಶಾವಾದಿತನ ಎಂದು ಕೂಡಾ ಹೇಳುತ್ತಾರೆ. ಇದು ಸಾಧಕರಾಗುವಲ್ಲಿ ಅನಿವಾರ್ಯವಾದ ಮೊದಲ ಬದಲಾವಣೆ. ಇದಿಲ್ಲದೆ ನಾವು ಒಂದು ಹೆಜ್ಜೆ ಕೂಡಾ ಸಾಧನೆಯ ಹಾದಿಯಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲ.
ಬನ್ನಿ. ನಾವು ಆಶಾವಾದಿಗಳಾಗೋಣ. ಗೆಲುವನ್ನು ನಮ್ಮದಾಗಿಸಿಕೊಳ್ಳೋಣ.

No comments:

Post a Comment